ಪ್ಯಾಸೆರಿಫಾರ್ಮೀಸ್	 -  
ಏವೀಸ್ ವರ್ಗದ (ಪಕ್ಷಿಗಳ ಗುಂಪು) 27 ಗಣಗಳ ಪೈಕಿ ಒಂದು. ಇದು ಸುಮಾರು 5,100 ಪ್ರಭೇದಗಳನ್ನು ಒಳಗೊಂಡಿದ್ದು ಪಕ್ಷಿವರ್ಗದ ಗಣಗಳಲ್ಲೆಲ್ಲ ಅತ್ಯಂತ ದೊಡ್ಡದು ಎನಿಸಿಕೊಂಡಿದೆ. ಎಲ್ಲ ಪಕ್ಷಿ ತಜ್ಞರು ಸಾಮಾನ್ಯವಾಗಿ ಒಪ್ಪಿರುವಂತೆ ಏವೀಸ್ ವರ್ಗದಲ್ಲಿ ಒಟ್ಟು 8,600 ಪಕ್ಷಿ ಪ್ರಭೇದಗಳುಂಟು. ಆದ್ದರಿಂದ ಪ್ಯಾಸೆರಿಫಾರ್ಮೀಸ್ ಗಣದಲ್ಲಿ ಪಕ್ಷಿಗಳು ಒಟ್ಟು ಸಂಖ್ಯೆಯ ಐದನೆಯ ಮೂರು ಅಂಶದಷ್ಟು ಪ್ರಭೇದಗಳಿವೆ ಎಂದಾಯಿತು. ಇಷ್ಟೇ ಅಲ್ಲ, ಉಳಿದ 26 ಗಣಗಳ ಸದಸ್ಯಗಳಿಗೆ ಹೋಲಿಸಿದರೆ ಈ ಗಣದ ಹಕ್ಕಿಗಳು ತುಂಬ ವೈವಿಧ್ಯಮಯವೂ ದೈಹಿಕ ರಚನೆಯಲ್ಲಿ ಮುಂದುವರಿದಂಥವೂ ಆಗಿವೆ. 

ಈ ಗಣದ ಹಕ್ಕಿಗಳ ಅತ್ಯಂತ ಪ್ರಧಾನ ಲಕ್ಷಣ ಇವು ಹಾರಿ ಬಂದು ಮರಗಿಡಗಳ ರೆಂಬೆಗಳ ಮೇಲೆ ಕೂರಲು ತುಂಬ ಅನುಕೂಲವಾಗಿರುವಂಥ ಕಾಲುಗಳು : ಕಾಲುಗಳಲ್ಲಿ ಮುಂದಕ್ಕೆ ಚಾಚಿರುವ ಮೂರು ಮತ್ತು ಹಿಂದಕ್ಕೆ ಚಾಚಿರುವ ಒಂದು - ಹೀಗೆ ಒಟ್ಟು ನಾಲ್ಕು ಬೆರಳುಗಳಿವೆ. ಹಿಂದಿನ ಬೆರಳು ಉಳಿದವಕ್ಕಿಂಥ ಹೆಚ್ಚು ಬಲಯುತವಾದ್ದೂ ಚೆನ್ನಾಗಿ ರೂಪುಗೊಂಡಿರುವಂಥದೂ ಆಗಿದೆಯಲ್ಲದೆ ಇದನ್ನು ಮುಂದಕ್ಕೆ ಬಾಗಿಸುವುದಕ್ಕೆ ಆಗದು. ಈ ಹಕ್ಕಿಗಳ ಉಳಿದ ವಿಶಿಷ್ಟ ಲಕ್ಷಣಗಳೆಂದರೆ ಇವುಗಳ ಬಾಯಂಗುಳದ ಎಲುಬುಗಳ ರಚನೆ, ಕತ್ತಿನ ಕಶೇರುಗಳ ಸಂಖ್ಯೆ 14 ಕ್ಕೆ ಇಳಿದಿರುವುದು (ಯೂರಿಲೇಮಿಡೀ ಕುಟುಂಬಕ್ಕೆ ಸೇರಿದ ಬ್ರಾಡ್‍ಬಿಲ್ ಹಕ್ಕಿಗಳಲ್ಲಿ ಮಾತ್ರ ಈ ಸಂಖ್ಯೆ 15 ಇದೆ.) ಹಾಗೂ ಇವುಗಳ ಮರಿಗಳು ಹುಟ್ಟಿದಾಗ ರೆಕ್ಕೆಪುಕ್ಕಗಳಿಂದ ಆವೃತವಾಗದೆ ತುಂಬ ಅಸಹಾಯಕ ಸ್ಥಿತಿಯಲ್ಲಿರುವುದು. ಎಂದೇ ಈ ಹಕ್ಕಿಗಳು ತಮ್ಮ ಮರಿಗಳನ್ನು ತುಂಬ ಜತನದಿಂದ ಪೋಷಿಸುವುವು. 

ಪ್ಯಾಸೆರಿಫಾರ್ಮೀಸ್ ಗಣದ ಹಕ್ಕಿಗಳು ಅಂಟಾಕ್ರ್ಟಿಕವನ್ನುಳಿದು ಎಲ್ಲ ಭೂಪ್ರದೇಶಗಳಲ್ಲೂ ಕಾಣಸಿಗುವುವು : ಇವು ಸಣ್ಣ ಗಾತ್ರದವು. ಇಲ್ಲವೆ ಮಧ್ಯಮ ಗಾತ್ರದವು. ಆಸ್ಟ್ರೇಲಿಯದಲ್ಲಿ ಕಾಣಬರುವ ಲೈರ್ ಹಕ್ಕಿಗಳು ಹಾಗೂ ಉತ್ತರಾರ್ಧಗೋಳದಲ್ಲಿ ಮಾತ್ರ ಕಂಡುಬರುವ ರೇವನ್ ಹಕ್ಕಿಗಳೇ (ಕಾಗೆಗಳ ದಾಯಾದಿ - ಇದರ ಉದ್ದ ಸುಮಾರು 65 ಸೆಂ.ಮೀ.) ಈ ಗಣದ ಹಕ್ಕಿಗಳಲ್ಲೆಲ್ಲ ಅತ್ಯಂತ ದೊಡ್ಡ ಗಾತ್ರದವು.

ಈ ಗಣದ ಹಕ್ಕಿಗಳ ಪೂರ್ವೇತಿಹಾಸ ಮತ್ತು ಉಳಿದ ಭೂವಾಸಿ ಹಕ್ಕಿಗಳೊಂದಿಗೆ ಇವುಗಳ ಸಂಬಂಧಗಳು ಇಂದಿಗೂ ಬಗೆಹರಿಯದಿರುವ ವಿಚಾರಗಳು, ಬಹುಶಃ ಟರ್ಷಿಯರಿ ಕಾಲದಲ್ಲೊ ಅದಕ್ಕಿಂತ ಮುಂಚೆಯೊ ಇವು ಹಲವಾರು ಪೂರ್ವಜ ಮೂಲಗಳಿಂದ ಉದ್ಭವಿದಿದುವು. ಟರ್ಷಿಯೆರಿ ಹಾಗೂ ಅನಂತರದ ಅವಧಿಗಳಲ್ಲಿ ಬೇರಾವುದೇ ಹಕ್ಕಿ ಗುಂಪಿಗಿಂತ ಅತ್ಯಂತ ಶೀಘ್ರ ಗತಿಯಲ್ಲಿ ಮತ್ತು ಯಶಸ್ವಿಯಾಗಿ ಇವು ವಿಕಸಿಸಿದುವು. ಬೇರೆ ಗುಂಪುಗಳಿಗೆ ಹೋಲಿಸಿದರೆ ಇವುಗಳ ಉದ್ಭವ ತೀರಾ ಇತ್ತೀಚಿನದಾದ್ದರಿಂದ ಈ ಗಣದ ವಿವಿಧ ಕುಟುಂಬಗಳ ನಡುವಣ ವ್ಯತ್ಯಾಸ ರೇಖೆಗಳು ಖಚಿತವಾಗಿಲ್ಲ. ಆದ್ದರಿಂದ ಈ ಗಣವನ್ನು ಕೆಲವರು 50 ಕುಟುಂಬಗಳಾಗಿ ವಿಭಾಗಿಸಿದರೆ ಇನ್ನು ಕೆಲವರು 70 ಕುಟುಂಬಗಳನ್ನಾಗಿ ವಿಂಗಡಿಸುವುದುಂಟು.

ಜರ್ಮನಿಯ ಅಂಗರಚನಾಶಾಸ್ತ್ರಜ್ಞ ಮ್ಯೂಲರ್ ಎಂಬಾತ ಈ ಹಕ್ಕಿಗಳ ಧ್ವನಿಪೆಟ್ಟಿಗೆಗೆ (ಸಿರಿಂಕ್ಸ್) ಸಂಬಂಧಿಸಿದ ಸ್ನಾಯುಗಳ ಸಂಖ್ಯೆಯನ್ನು ಆಧರಿಸಿ ಪ್ಯಾಸೆರಿಫಾರ್ಮೀಸ್ ಗಣವನ್ನು ಯೂರಿಲೇಮಿ, ಟಿರಾನಿ, ಮೆನ್ಯೂರಿ ಮತ್ತು ಪ್ಯಾಸೆರೀಸ್ ಎಂಬ ನಾಲ್ಕು ಉಪಗಣಗಳನ್ನಾಗಿ ವಿಂಗಡಿಸಿದ. ಮೊದಲ ಮೂರು ಉಪಗಣಗಳ ಹಕ್ಕಿಗಳ ಧ್ವನಿಪೆಟ್ಟಿಗೆಯಲ್ಲಿ 4 ಜೊತೆ ಅಥವಾ ಕಡಿಮೆ ಸ್ನಾಯುಗಳಿವೆಯಾದರೆ ಪ್ಯಾಸರೀಸ್ ಉಪಗಣದವುಗಳಲ್ಲಿ 5-8 ಜೊತೆ ಸ್ನಾಯುಗಳಿವೆ. ಇದರಿಂದಾಗಿಯೇ ಈ ಉಪಗಣದ ಹಕ್ಕಿಗಳಿಗೆ ಸ್ವನಗೈಯುವ ಸಾಮಥ್ರ್ಯ ಲಭಿಸಿದ್ದು ಇವು ಹಾಡು ಹಕ್ಕಿಗಳೆಂದು ಹೆಸರಾಗಿವೆ. ಪ್ರಭೇದಗಳ ಸಂಖ್ಯೆಯಲ್ಲೂ ಈ ಉಪಗಣ ಇದರಲ್ಲಿ 40 ಕ್ಕೂ ಹೆಚ್ಚು ಕುಟುಂಬಗಳುಂಟು. ಈ ಉಪಗಣದ ಒಟ್ಟು ಪ್ರಭೇದಗಳ ಸಂಖ್ಯೆ 4,000 ಕ್ಕೂ ಅಧಿಕ. ಅಂದರೆ ಒಟ್ಟು ಪಕ್ಷಿ ಪ್ರಭೇದಗಳ ಸಂಖ್ಯೆಯ ಅರ್ಧದಷ್ಟು. 

ಈ ಗಣದ ಮುಖ್ಯ ಉದಾಹರಣೆಗಳು ಪಿಟ್ಟ, ಕೋಟಿಂಗ, ನೊಣಹಿಡುಕಗಳು, ಲೈರ್ ಹಕ್ಕಿಗಳು, ಸೂರಕ್ಕಿಗಳು ಲಾರ್ಕ್‍ಸ್ವಾಲೊ, ಕಾಜಾಣ, ಕಾಗೆ, ಕುಂಜಹಕ್ಕಿಗಳು, ಸಗ್ಗವಕ್ಕಿ, ನಟ್‍ಹ್ಯಾಚ್, ಬ್ಯಾಬ್ಲರ್, ಬುಲ್‍ಬುಲ್, ರೆನ್, ರಾಬಿನ್, ಗುಬ್ಬಿ, ಗೊರವಂಕ, ವಾಬ್ರ್ಲರ್, ಫಿಂಚ್ ಹಕ್ಕಿಗಳು, ಗೀಜಗ, ಇತ್ಯಾದಿ.				(ಎನ್.ಎಂ;*)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ